Manjushree's Kairuchi
Untitled Document

ಪಿನ್ ವೀಲ್ ಕುಕೀಸ್

Image
  • ಶೈಲಿ :ಕಾಂಟಿನೆಂಟಲ್
  • ಸರ್ವ್ :20
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಮೈದಾಹಿಟ್ಟು ೧ ಕಪ್
  • ಸಕ್ಕರೆ ಪುಡಿ ೧/೨ ಕಪ್
  • ಬೆಣ್ಣೆ ೧/೪ ಕಪ್
  • ವೆನಿಲ್ಲಾ ಎಸೆನ್ಸ್ ೧ ಟೀ ಚ
  • ಹಾಲು ೧ ದೊಡ್ಡ ಚಮಚ
  • ಉಪ್ಪು ಚಿಟಿಕೆ
  • ಬೇಕಿಂಗ್ ಪೌಡರ್ ೧/೨ ಟೀ ಚ
  • ಕೋಕೋ ಪುಡಿ ಅಥವಾ ಚಾಕಲೇಟ್ ಸಿರಪ್ ೧ ದೊಡ್ಡ ಚ
  • ದಾಲ್ಚಿನ್ನಿ ಪುಡಿ ಚಿಟಿಕೆ (ಬೇಕಿದ್ದರೆ)
  • ಜಾಯಿಕಾಯಿ ಪುಡಿ ಚಿಟಿಕೆ (ಬೇಕಿದ್ದರೆ)

ಮಾಡುವ ವಿಧಾನ

ನಾವು ಈಗ ಕ್ರಿಸ್ಮಸ್ ತಿಂಗಳಿನಲ್ಲಿ ಇದ್ದೇವೆ , ಕ್ರಿಸ್ಮಸ್ ಎಂದಕೂಡಲೇ ಬಗೆಬಗೆಯ ಕುಕೀಸ್, ಕೇಕು ಮತ್ತು ಚಾಕಲೇಟ್ ಗಳಿಂದ ತುಂಬಿರುವ ಹಬ್ಬ, ಈ ಪಿನ್ ವೀಲ್ ಕುಕೀಸ್ ಈ ಹಬ್ಬಕ್ಕೆ ಹೇಳಿ ಮಾಡಿಸಿದ್ದು ಹಾಗೆಯೇ ಹುಟ್ಟುಹಬ್ಬಗಳಲ್ಲಿ, ಮಕ್ಕಳ ಸಂಜೆಯ ಉಪಹಾರಕ್ಕೆ ಇದು ಚೆನ್ನಾಗಿರುತ್ತೆ ಎಂದು ಹೇಳಬಹುದು. ಇಲ್ಲಿ ನಾನು ಸುಲಭವಾಗಿ ಮೊಟ್ಟೆ ಉಪಯೋಗವಿಲ್ಲದೇ ರುಚಿಕರ ಕುಕೀಸ್ ಹೇಗೆ ಮಾಡುವದು ಎಂದು ತಿಳಿಸಿದ್ದೇನೆ, ನಾನು ತಿಳಿಸಿದ ಅಳತೆಯಲ್ಲಿ ೨೦-೨೫ ಕುಕೀಸ್ ಮಾಡಬಹುದು. ಮಾಡಿ ಅಭಿಪ್ರಾಯ ತಿಳಿಸಿ. 

ಮೊದಲು ಒಂದು ಪಾತ್ರೆಯಲ್ಲಿ ಸಕ್ಕರೆ ಪುಡಿ, ಬೆಣ್ಣೆ, ಹಾಲು ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಗಂಟಿಲ್ಲದಂತೆ ಹೊಂದಿಸಿ.
ನಂತರ ಅದಕ್ಕೆ ಮೈದಾಹಿಟ್ಟು, ದಾಲ್ಚಿನ್ನಿ ಜಾಯಿಕಾಯಿ ಪುಡಿ, ಬೇಕಿಂಗ್ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಹಿಟ್ಟನ್ನು ತಯಾರಿಸಿಕೊಳ್ಳಿ.
ಈಗ ಅದನ್ನು ಎರಡು ಸಮಪ್ರಮಾಣದಲ್ಲಿ ಉಂಡೆಮಾಡಿ, ಒಂದು ಉಂಡೆಗೆ ಕೋಕೋ ಪುಡಿ ಅಥವಾ ಚಾಕಲೇಟ್ ಸಿರಪ್ ಸೇರಿಸಿ ಚೆನ್ನಾಗಿ ನಾದಿ.
ಈಗ ಎರಡು ಉಂಡೆಗಳನ್ನು ಬೇರೆ ಬೇರೆ  ಚೌಕಾಕಾರಕ್ಕೆ ಲಟ್ಟಿಸಿ, ಒಂದರ ಮೇಲೊಂದು ಇಟ್ಟು, ಸುರುಳಿ ಸುತ್ತಿ,  ಬಟರ್ ಪೇಪರ್ ನಲ್ಲಿ ಸುತ್ತಿ ೨೫-೩೦ ನಿಮಿಷಗಳ ಕಾಲ ಫ್ರಿಡ್ಜ್ ನಲ್ಲಿ ಇಡಿ.
ಓವೆನ್ ಅನ್ನು   180°C/ 350 °F/  ನಲ್ಲಿ ಪ್ರಿ ಹೀಟ್ ಮಾಡಿ.
ಫ್ರಿಡ್ಜ್ ನಲ್ಲಿ ಇಟ್ಟ ರೋಲ್ ಅನ್ನು ಕಾಲು
ಇಂಚು ಅಂತರದಲ್ಲಿ ಕತ್ತರಿಸಿ, ತುಪ್ಪ ಸವರಿದ ಪ್ಲೇಟ್  ಮೇಲೆ ಇಟ್ಟು, ಮೊದಲೇ ಬಿಸಿಮಾಡಿದ ಓವೆನ್ ನಲ್ಲಿ ೨೦ ನಿಮಿಷ ಬೇಯಿಸಿ.
ಪ್ರೆಷರ್ ಕುಕ್ಕರ್ ನಲ್ಲಿ ಮಾಡುವದಾದರೆ ಮೊದಲು ಕುಕ್ಕರ್ ನ ಬಿಸಿಮಾಡಿ, ನಂತರ ಒಂದು ಖಾಲಿ ಪಾತ್ರೆ ಇಟ್ಟು ಅದರ ಮೇಲೆ ಕುಕೀಸ್ ಇದ್ದ ಪ್ಲೇಟ್ ಇಟ್ಟು, ಮುಚ್ಚಿ, ಮದ್ಯಮ ಉರಿಯಲ್ಲಿ ೪೦ ರಿಂದ ೪೫ ನಿಮಿಷ ಬೇಯಿಸಿ.(ಕುಕ್ಕರ್ ನ ವಿಷೆಲ್ ಹಾಗು ಗ್ಯಾಸ್ಕೆಟ್ ಹಾಕಬಾರದು ಹಾಗೆಯೇ ಮುಚ್ಚಳ ಮುಚ್ಚಿ ಬೇಯಿಸಿ).

ಸೂಚನೆ:- ಸಿಹಿ ಇನ್ನು ಸ್ವಲ್ಪ ಬೇಕಾದವರು ೧-೨ ದೊಡ್ಡ ಚಮಚ ಸಕ್ಕರೆ ಪುಡಿಯನ್ನು ಇನ್ನು ಸೇರಿಸಿಕೊಳ್ಳಬಹುದು. 

comments powered by Disqus