Manjushree's Kairuchi
Untitled Document

ಪನೀರ್ ಕಾರ್ನ್ ಯಖ್ನಿ ಪಲಾವ್

Image
  • ಶೈಲಿ : ಮುಘಲೈ
  • ಸರ್ವ್ :4
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಬಾಸುಮತಿ ಅಕ್ಕಿ ೩ ಕಪ್
  • ತಾಜಾ ಮಜ್ಜಿಗೆ /ಬೇಯಿಸಿದ ತರಕಾರಿ ನೀರು 5 ಕಪ್
  • ಸಣ್ಣಗೆ ಹೆಚ್ಚಿದ ಪನೀರ್ ೧ ಕಪ್
  • ಸಿಹಿಜೋಳದ ಬೀಜಗಳು ೧ ಕಪ್
  • ಸಣ್ಣಗೆ ಕ್ಯಾಪ್ಸಿಕಂ ೧/೨ ಕಪ್
  • ಸಣ್ಣಗೆ ಹೆಚ್ಚಿದ ಈರುಳ್ಳಿ ೧/೨ ಕಪ್
  • ಗಟ್ಟಿ ಮೊಸರು ೧ ಕಪ್
  • ಉಪ್ಪು ರುಚಿಗೆ ತಕ್ಕಷ್ಟು
  • ಎಣ್ಣೆ ೪ ದೊಡ್ಡ ಚ
  • ತುಪ್ಪ ೧ ದೊಡ್ಡ ಚ
  • ಅರಿಶಿನ ೧/೨ ಟೀ ಚ
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ ೧ ದೊಡ್ಡ ಚ
  • ಕೊತ್ತೊಂಬರಿ ಸೊಪ್ಪು
  • ಶಾಹಿಜಿರಾ ೧ ಟೀ ಚ
  • ಮಸಾಲೆಪುಡಿಗೆ :-
  • ಏಲಕ್ಕಿ ೬
  • ಸೋಂಪು ೧ ಟೀ ಚ
  • ಚಕ್ಕೆ ೧ ಇಂಚು
  • ಚಕ್ರಮೊಗ್ಗು ೧/೨
  • ಲವಂಗ ೬
  • ಕರಿಮೆಣಸು 10 ಕಾಳುಗಳು
  • ಬ್ಯಾಡಗಿ ಒಣಮೆಣಸು ೬-೮
  • ಪಲಾವ್ ಎಲೆ ೨

ಮಾಡುವ ವಿಧಾನ

ಸಾಮಾನ್ಯವಾಗಿ ನಾವು ಗಡಿಬಿಡಿಯಲ್ಲಿ ಪಲಾವ್  ಅಥವಾ ಯಾವುದಾದರೂ ಅನ್ನದ ಬಗೆ ಮಾಡುವಾಗ 
ಪುಡಿಗಳನ್ನು ಮಾಡಿ ಇಟ್ಟುಕೊಂಡು ಮುಗಿಯುವವರೆಗೆ ಅದನ್ನೇ ಮಾಡುತ್ತೇವೆ, ಆದರೆ ಆಗಿಂದಾಗಲೇ ಪಲಾವ್  ಪುಡಿ ಮಾಡಿ ಅದರಲ್ಲಿ ಅಡುಗೆ ಮಾಡಿದರೆ ತಾಜಾ ರುಚಿ ಹಾಗು ಪರಿಮಳವನ್ನು ಕೊಡುತ್ತದೆ. ಹೀಗೆ ಸ್ವಲ್ಪ ವಿಭಿನ್ನ ರೀತಿಯಲ್ಲಿ ಮಾಡಿದ್ದು ಈ "ಪನೀರ್ ಯಖ್ನಿ ಪಲಾವ್  ". ಯಖ್ನಿ ಪಲಾವ್ ಇದು ಪಾಕಿಸ್ತಾನಿ, ಮುಘಲೈ ಅಥವಾ ಹೈದೆರಾಬಾದ್ ನಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಈದ್ ಸಮಯದಲ್ಲಿ ಇದನ್ನು ಸಾಮಾನ್ಯವಾಗಿ ಮಾಡಿಯೇ ಮಾಡುತ್ತಾರೆ. ಯಖ್ನಿ ಎಂದರೆ ಬೇಯಿಸಿದ ತರಕಾರಿ ನೀರು ಅಥವಾ ಬೇಯಿಸಿದ ಮಾಂಸದ ನೀರು  ಎಂದು ಅರ್ಥ. ಇಲ್ಲಿ ನಾನು ಇದನ್ನು ಸಸ್ಯಾಹಾರಿ ಶೈಲಿಯಲ್ಲಿ ಮಾಡಿದ್ದೇನೆ, 
ಹಾಗು ತರಕಾರಿ ನೀರಿನ ಬದಲು ತಾಜಾ ಮಜ್ಜಿಗೆ ಉಪಯೋಗಿಸಿದ್ದೇನೆ . ತುಂಬಾ ರುಚಿಕರ ತಾಜಾ ಪರಿಮಳದಿಂದ ಕೂಡಿದ ಈ ಅನ್ನದ ಬಗೆ ಮಾಡುವ ವಿಧಾನ ಮತ್ತು ಬೇಕಾಗುವ ಸಾಮಗ್ರಿಗಳನ್ನು ವಿವರಿಸಿದ್ದೇನೆ, ಮಾಡಿ ಅಭಿಪ್ರಾಯ ತಿಳಿಸಿ. 

ಮೊದಲು ಮಸಾಲೆಪುಡಿಗೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಸೇರಿಸಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಿ. 
ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು, ಪ್ರೆಷರ್ ಕುಕ್ಕರ್ ಗೆ ಹಾಕಿ ಅದಕ್ಕೆ ಚಿಟಿಕೆ ಉಪ್ಪು ಮತ್ತು ಮಜ್ಜಿಗೆ ಸೇರಿಸಿ ಉದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
ಒಂದು ತವಾವನ್ನು ಬಿಸಿಮಾಡಿ ಅದಕ್ಕೆ ಚೂರೇ ಚೂರು ತುಪ್ಪ ಹಾಕಿ ಸಣ್ಣಗೆ ಹೆಚ್ಚಿಟ್ಟುಕೊಂಡ ಪನೀರ್ ಸೇರಿಸಿ ಹೊಂಬಣ್ಣ ಬರುವವರೆಗೆ ಬಾಡಿಸಿ ಇಟ್ಟುಕೊಳ್ಳಿ.
ಈಗ ದಪ್ಪತಳದ ಪಾತ್ರೆಯಲ್ಲಿ ಎಣ್ಣೆ ಹಾಗು ಉಳಿದ ತುಪ್ಪ ಬಿಸಿಮಾಡಿ,ಅದಕ್ಕೆ ಶಾಹಿಜಿರಾ, ಶುಂಠಿಬೆಳ್ಳುಳ್ಳಿ ಪೇಸ್ಟ್, ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ ಮತ್ತು ಸಿಹಿಜೋಳ ಹಾಕಿ ಚೆನ್ನಾಗಿ ಬಾಡಿಸಿ.
ಒಮ್ಮೆ ಸಿಹಿಜೋಳ ಬೆಂದಮೇಲೆ ಅದಕ್ಕೆ ಅರಿಶಿನ, ಮಾಡಿಟ್ಟುಕೊಂಡ ಪುಡಿ, ಉಪ್ಪು, ಮೊಸರು ಮತ್ತು ಪನೀರ್  ಸೇರಿಸಿ ಚೆನ್ನಾಗಿ ಕುದಿಸಿ.
ಮಿಶ್ರಣ ಎಣ್ಣೆ ಬಿಡಲು ಪ್ರಾರಂಭವಾದ ಮೇಲೆ ಅದಕ್ಕೆ ಮಾಡಿಟ್ಟುಕೊಂಡ ಅನ್ನ ಹಾಗು ಕೊತ್ತೊಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಹೊಂದಿಸಿ. 
ಸವತೇಕಾಯಿ ಮೊಸರುಬಜ್ಜಿ ಜೊತೆಗೆ ಸರ್ವ್ ಮಾಡಿ. 

 

comments powered by Disqus