Manjushree's Kairuchi
Untitled Document

ಮುಳ್ಳು ಸವತೆ ಒತ್ತು ಶ್ಯಾವಿಗೆ

Image
  • ಶೈಲಿ :ಹವ್ಯಕ ( ಉತ್ತರ ಕನ್ನಡ)
  • ಸರ್ವ್ :4
  • ಸಮಯ :5 ಗಂಟೆಗಳು

ಬೇಕಾಗುವ ಸಾಮಗ್ರಿಗಳು

  • ಮುಳ್ಳು ಸವತೆ ಚೂರುಗಳು ೧/೨ ಕಪ್
  • ಅಕ್ಕಿ ೧ ಕಪ್
  • ಏಲಕ್ಕಿ ಪುಡಿ ಸ್ವಲ್ಪ
  • ಉಪ್ಪು ರುಚಿಗೆ
  • ಬೆಲ್ಲ ೩/೪ ಕಪ್

ಮಾಡುವ ವಿಧಾನ

ಸಾಮಾನ್ಯವಾಗಿ ಮಲೆನಾಡಿನ ಹವ್ಯಕರು ಬಾಳೆಹಣ್ಣಿನ ಸಿಹಿ ಒತ್ತು ಶ್ಯಾವಿಗೆಯನ್ನು ತಯಾರಿಸುತ್ತಾರೆ, ಅದು ಅಲ್ಲಿನ ಸಾಂಪ್ರದಾಯಿಕ ಅಡುಗೆಗಳಲ್ಲಿ ಒಂದು, ಈಗ್ಗೆ ಸ್ವಲ್ಪ ವರ್ಷಗಳಿಂದ ಅದೇ ರೀತಿ ಹಲಸಿನ ಹಣ್ಣನ್ನು ಉಪಯೋಗಿಸಿ ಕೆಲವರು ಮಾಡುತ್ತಾರೆ. ಈಗ ಮಳೆಗಾಲ ಮುಗಿದು ಚಳಿ ಪ್ರಾರಂಭವಾಗಿದೆ ಈ ಸಮಯದಲ್ಲಿ ಅಲ್ಲೆಲ್ಲ ಒಂದು ಜಾತಿಯ ಮುಳ್ಳು ಸವತೆಯನ್ನು ಮನೆಗಳಲ್ಲಿಯೇ ಬೆಳೆದುಕೊಳ್ಳುತ್ತಾರೆ ತುಂಬಾ ಪರಿಮಳಭರಿತ ಹಾಗು ಸಾಮಾನ್ಯವಾಗಿ ಪೇಟೆಗಳಲ್ಲಿ ಸಿಗುವದರಿಂದ ತುಂಬಾ ದೊಡ್ಡದಾಗಿಯೂ ಇರುತ್ತದೆ. ಈ ದೀಪಾವಳಿ ರಜೆಗೆ ಊರಿಗೆ ಹೋದಾಗ ೫-೬ ತೆಗೆದುಕೊಂಡು ಬಂದಿದ್ದೆ, ಅದನ್ನು ನೋಡಿದಾಗಿನಿಂದ ಒಂದು ಯೋಚನೆ ಇದನ್ನು ಶ್ಯಾವಿಗೆ ಮಾಡಿದರೆ ಹೀಗೆ ?ನೋಡೋಣ ಅಂತ ಇಂದು ಮಾಡಿದೆ ತುಂಬಾ ಪರಿಮಳಭರಿತ ರುಚಿಕರವಾಗಿ ಆಯಿತು ಅದಕ್ಕೆ ನಿಮ್ಮೊಂದಿಗೆ ಇದನ್ನು ಹಂಚಿಕೊಳ್ಳುತ್ತ ಇದ್ದೇನೆ, ನೀವು ಮಾಡಿ ಅಭಿಪ್ರಾಯ ತಿಳಿಸಿ. 

ಮೊದಲು ಅಕ್ಕಿಯನ್ನು ತೊಳೆದು ೪ ರಿಂದ ೫ ಗಂಟೆಗಳ ಕಾಲ ನೆನೆಹಾಕಿ.

ನಂತರ ಅಕ್ಕಿಯನ್ನು ಮುಳ್ಳು ಸವತೆ ಚೂರುಗಳು, ಬೆಲ್ಲ ಸೇರಿಸಿ ನುಣ್ಣಗೆ ರುಬ್ಬಿ. ಹಿಟ್ಟು ದೋಸೆ ಹಿಟ್ಟಿನ ಹದಕ್ಕೆ ಇರಲಿ.

ಆಮೇಲೆ ಅದಕ್ಕೆ ಉಪ್ಪು ಹಾಗು ಏಲಕ್ಕಿ ಪುಡಿ ಸೇರಿಸಿ , ಇಡ್ಲಿ ಪಾತ್ರೆಗೆ ಹಾಕಿ ೨೦ ರಿಂದ ೩೦ ನಿಮಿಷ ಬೇಯಿಸಿ.

ನಂತರ ಅದನ್ನು ಬಿಸಿ ಬಿಸಿ ಇದ್ದಾಗಲೇ ಶ್ಯಾವಿಗೆ ಒರಳಿಗೆ ಹಾಕಿ ಒತ್ತಿ , ಶ್ಯಾವಿಗೆ ತಯಾರಿಸಿ.

ಇದನ್ನು ತುಪ್ಪದ ಜೊತೆ ಸರ್ವ್ ಮಾಡಿ.

comments powered by Disqus