Manjushree's Kairuchi
Untitled Document

ಹಣ್ಣು ಮೆಣಸಿನ ಚಟ್ನಿ

Image
  • ಶೈಲಿ :ಉತ್ತರ ಕರ್ನಾಟಕ(ಬಯಲುಸೀಮೆ)
  • ಸರ್ವ್ :10
  • ಸಮಯ :2 ಗಂಟೆಗಳು

ಬೇಕಾಗುವ ಸಾಮಗ್ರಿಗಳು

  • ಕೆಂಪು ಹಣ್ಣು ಮೆಣಸು ೨೫೦ ಗ್ರಾಂ
  • ಬೆಲ್ಲ ಅಥವಾ ಸಕ್ಕರೆ ೧ ದೊಡ್ಡಚಮಚ
  • ಬೆಳ್ಳುಳ್ಳಿ ೧ ಗೆಡ್ಡೆ
  • ಉಪ್ಪು ರುಚಿಗೆ ತಕ್ಕಷ್ಟು
  • ಎಣ್ಣೆ ೧ ದೊಡ್ಡ ಚಮಚ
  • ಮೆಂತ್ಯಕಾಳು ೧/೪ ಟೀ ಚ
  • ಜೀರಿಗೆ ೧ ಟೀ ಚ
  • ಕೊತ್ತೊಂಬರಿ ೧ ಟೀ ಚ
  • ಇಂಗು ಚಿಟಿಕೆ
  • ಹುಣಸೆಹಣ್ಣು ದೊಡ್ಡ ಲಿಂಬೆ ಗಾತ್ರದ್ದು
  • ಕರಿಬೇವು ೫-೬ ಎಲೆಗಳು

ಮಾಡುವ ವಿಧಾನ

ಇದು ಉತ್ತರ ಕರ್ನಾಟಕ(ಬಯಲುಸೀಮೆ)ದ ಒಂದು ರುಚಿಕರ ಚಟ್ನಿಗಳಲ್ಲಿ ಒಂದು,ಇದನ್ನು "ರಂಜಕ" ಎಂದು ಕರೆಯುತ್ತಾರೆ. ಬಯಲುಸೀಮೆಯಲ್ಲಿ ಮೆಣಸಿನ ಪ್ರಯೋಗ ಜಾಸ್ತಿ ಮತ್ತು ಅವರ ಅಡುಗೆಗಳು ಸ್ವಲ್ಪ ಖಾರವೆನಿಸಿದರೂ ತುಂಬಾರುಚಿಯಾಗಿರುತ್ತವೆ. ಅಲ್ಲಿ ಚಟ್ನಿ, ಚಟ್ನಿ ಪುಡಿಗಳು, ಎಣ್ಣೆಗಾಯಿ, ಕಾಳಿನಪಲ್ಯ ಹೀಗೆ ಹತ್ತು ಹಲವಾರು ಅಡುಗೆಗಳನ್ನು ಮಾಡುತ್ತಾರೆ, ಅದರಲ್ಲಿ ಈ ಹಣ್ಣು ಮೆಣಸಿನ ಚಟ್ನಿ ಒಂದು, ಸಾಮಾನ್ಯವಾಗಿ ಇದನ್ನು ಬ್ಯಾಡಗಿ ಮೆಣಸಿನಲ್ಲಿ ಮಾಡುತ್ತಾರೆ, ನನಗೆ ಅದು ದೊರಕದ ಕಾರಣ, ನನಗೆ ಸಿಕ್ಕ ಹಣ್ಣುಮೆಣಸನ್ನು ಉಪಯೋಗಿಸಿ ಮಾಡಿದ್ದೇನೆ. ತುಂಬಾ ಪರಿಮಳ, ಸ್ವಲ್ಪ ಖಾರ, ಸಿಹಿ, ಹುಳಿ ಮಿಶ್ರಿತ ಈ ಚಟ್ನಿ ಅನ್ನದ ಜೊತೆಗೆ ತುಂಬಾ ಚೆನ್ನಾಗಿರುತ್ತದೆ. ಇದನ್ನು ನನ್ನ ಅಪಾರ್ಟ್ಮೆಂಟಿನ, ಉತ್ತರ ಕರ್ನಾಟಕದ ಆಂಟಿ ಹೇಳಿಕೊಟ್ಟಿದ್ದು,ಹಾಗೆಯೇ ಈ  ನನ್ನ ಆತ್ಮೀಯ ಸ್ನೇಹಿತೆ ಸುಶೀಲಾ ರಾಘವ್ ಕೂಡ ಮಾಡಲು ಸಹಾಯ ಮಾಡಿದ್ದಾಳೆ. 

ಮೊದಲು ಮೆಣಸನ್ನು ತೊಳೆದು ಬಟ್ಟೆಯಮೇಲೆ ಹರವಿ ಹಾಕಿ, ನೀರಿನಂಶ ಆರಿದಮೇಲೆ ದೊಡ್ಡಕ್ಕೆ ಹೆಚ್ಚಿಟ್ಟುಕೊಳ್ಳಿ.
ಈಗ ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಜೀರಿಗೆ, ಕೊತ್ತೊಂಬರಿ, ಮೆಂತ್ಯ, ಬೆಳ್ಳುಳ್ಳಿ, ಕರಿಬೇವು, ಹುಣಸೆಹಣ್ಣು, ಹೆಚ್ಚಿದಮೆಣಸು ಎಲ್ಲ ಸೇರಿಸಿ ಹುರಿಯಿರಿ. ಆರಲು ಬಿಡಿ.
ಹುರಿದ ಮಿಶ್ರಣ ತಣಿದ ಮೇಲೆ ಅದಕ್ಕೆ, ಉಪ್ಪು, ಬೆಲ್ಲ ಅಥವಾ ಸಕ್ಕರೆ, ಇಂಗು ಸೇರಿಸಿ ನುಣ್ಣಗೆ ರುಬ್ಬಿ. 
ಇದು ಸಂಪೂರ್ಣ ತಣಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ ಇಡಿ. ಇದನ್ನು ವಾರಗಟ್ಟಲೆ ಉಪಯೋಗಿಸಬಹುದು.
ಕೆಲವರು ಹುರಿಯುವಾಗ ಸ್ವಲ್ಪ ಕೊಬ್ಬರಿಯನ್ನು ಸೇರಿಸುತ್ತಾರೆ, ನಾನಿಲ್ಲಿ ಉಪಯೋಗ ಮಾಡಿಲ್ಲ, ಬೇಕಿದ್ದರೆ ಅದನ್ನು ಹಾಕಿಕೊಳ್ಳಬಹುದು. 

 

comments powered by Disqus